ಕೊಆಲ
	
ಆಸ್ಟ್ರೇಲಿಯ ಖಂಡದ ವಿಶಿಷ್ಟ ಹಾಗೂ ವಿಚಿತ್ರವಾದ ಪ್ರಾಣಿಗಳಲ್ಲಿ ಒಂದು. ಮ್ಯಾಮೇಲಿಯ ವರ್ಗ, ಮಾಸ್ರ್ಯುಪಿಯೇಲಿಯ ಗಣ, ಫಲಾಂಜೆಡೀ ಕುಟುಂಬಕ್ಕೆ ಸೇರಿದೆ.  ಇದರ ಶಾಸ್ತ್ರೀಯನಾಮ ಫ್ಯಾಸ್ಕೊಲಾಕ್ರ್ವಸ್ ಸಿನೆರಿಯಸ್.  ಇದು ಸಂಪೂರ್ಣ ವೃಕ್ಷವಾಸಿ. ಪೂರ್ವ ಆಸ್ಟ್ರೇಲಿಯದ ಯೂಕಲಿಪ್ಟಸ್ ವನಗಳಲ್ಲೇ ಇದರ ವಾಸ. ಇದರ ಗಾತ್ರ ಸಣ್ಣ ನಾಯಿಮರಿಯಷ್ಟಿದೆ. (ದೇಹದ ಉದ್ದ 600-850 ಮಿಮೀ., ತೂಕ 4-15 ಕೆಜಿ.) ಮೈಮೇಲೆಲ್ಲ ದಟ್ಟವಾದ ಮೃದು ಉಣ್ಣೆಯಿದೆ. ದೇಹದ ಬೆನ್ನು ಭಾಗದ ಬಣ್ಣ ಬೂದು, ಉದರಭಾಗದ ಬಣ್ಣ ಬಿಳಿ. ಕಿವಿಯ ಅಂಚಿನ ಮೇಲೆ ಉದ್ದವಾದ ಬಿಳಿ ಕೂದಲುಗಳಿವೆ. ದೊಡ್ಡತಲೆ, ಅಗಲವಾದ ಮತ್ತು ಪೊದೆಯಂಥ ಕಿವಿಗಳು, ಮುಂಚಾಚಿದ ಮೂಗು, ಬಾಲವಿಲ್ಲದಿರುವುದು, ಸಣ್ಣ ಆದರೆ ಹೋಳೆಯುವ ಕಣ್ಣುಗಳು ಇದರ ಪ್ರಮುಖ ಲಕ್ಷಣಗಳು. ಈ ಲಕ್ಷಣಗಳಿಂದಾಗಿ ಕೊಆಲ ನೋಡಲು ಆಟದ ಕರಡಿಯಂತೆ ಮುದ್ದಾಗಿ ಕಾಣುತ್ತದೆ. ಕೊಆಲದ ಕೈಯಲ್ಲಿನ ಮೊದಲೆರಡು ಬೆರಳುಗಳು ಉಳಿದ ಮೂರು ಬೆರಳುಗಳಿಗೆ ಅಭಿಮುಖವಾಗಿವೆ. ಈ ಏರ್ಪಾಡಿನಿಂದ ಮರ ಹತ್ತುವಾಗ ರೆಂಬೆಗಳನ್ನು ಹಿಡಿಯಲು ಅನುಕೂಲ. ಮಾಸ್ರ್ಯುಪಿಯೇಲಿಯ ಗಣದ ಉಳಿದ ಪ್ರಾಣಿಗಳಿಗಿರುವಂತೆಯೆ ಕೊಆಲದಲ್ಲೂ ಗರ್ಭಚೀಲವಿದೆ. 

	ಯೂಕಲಿಪ್ಟಸ್ ಎಲೆಗಳು ಮತ್ತು ತೊಗಟೆಯನ್ನು ಬಿಟ್ಟು ಉಳಿದ ಯಾವ ಬಗೆಯ ಆಹಾರವನ್ನೂ ಕೊಆಲ ತಿನ್ನುವುದಿಲ್ಲ. ಅದರಲ್ಲೂ ನಿರ್ದಿಷ್ಟ ಬಗೆಯ ಮಣ್ಣಿನಲ್ಲಿ ಬೆಳೆಯುತ್ತಿದ್ದು ನಿರ್ದಿಷ್ಟ ವಯಸ್ಸಾದ ಸುಮಾರು 12 ಯೂಕಲಿಪ್ಟಸ್ ಪ್ರಭೇದಗಳ ಎಲೆಗಳೇ ಆಗಬೇಕು.  ಪ್ರೌಢವಯಸ್ಸಿನ ಒಂದು ಕೊಆಲ ದಿನಕ್ಕೆ 2-3 ಪೌಂ. ಎಲೆಗಳನ್ನು ಭಕ್ಷಿಸುತ್ತದೆ. ಈ ರೀತಿಯ ಆಹಾರಕ್ರಮಕ್ಕೆ ಸಹಾಯಕವಾಗುವಂತೆ ಕೊಆಲದ ಕರುಳಿನ ಬಳಿ 6(-8( ಉದ್ದದ ಸೀಕಮ್ ಎಂಬ ಅನುಬಂಧಿಕೆ ಇದೆ. ಯೂಕಲಿಪ್ಟಸ್ ಎಲೆಗಳನ್ನು ಮಾತ್ರ ತಿನ್ನುವುದರಿಂದ ಕೊಆಲಗಳಿಗೆ ಅದೇ ವಾಸನೆ ಇದೆ.
ಕೊಆಲಗಳು ಒಂಟೊಂಟಿಯಾಗಿ ಇಲ್ಲವೆ ಸಣ್ಣ ಗುಂಪುಗಳಲ್ಲಿ ವಾಸಿಸುತ್ತವೆ. ಇವುಗಳ ಸಂತಾನೋತ್ಪತ್ತಿಯ ಕಾಲ ಸೆಪ್ಟೆಂಬರಿನಿಂದ ಜನವರಿ ವರೆಗೆ.  ಹೆಣ್ಣು ವರ್ಷ ಬಿಟ್ಟು ವರ್ಷಕ್ಕೊಂದು ಸೂಲಿನಂತೆ ಮರಿ ಹಾಕುತ್ತದೆ. ಸೂಲಿಗೆ ಒಂದೇ ಒಂದು ಮರಿ ಹುಟ್ಟುತ್ತದೆ. ಗರ್ಭಧಾರಣೆಯ ಅವಧಿ ಸುಮಾರು 30-35 ದಿವಸಗಳು. ಹುಟ್ಟಿದಾಗ ಮರಿ ಸುಮಾರು 5 ಳಿ ಗ್ರಾಂ. ತೂಗುತ್ತಿದ್ದು ಬಹಳ ಅಸಹಾಯಕ ಸ್ಥಿತಿಯಲ್ಲಿರುತ್ತದೆ. ಸುಮಾರು 6 ತಿಂಗಳ ಕಾಲ ತಾಯಿಯ ಗರ್ಭಚೀಲದಲ್ಲೇ ಹುದುಗಿಕೊಂಡಿದ್ದು ಅನಂತರ ಹೊರಬಂದು ತಾಯಿಯ ಆರೈಕೆಯಲ್ಲೇ ಸುಮಾರು. ಒಂದು ವರ್ಷ ಕಾಲ ಕಳೆದು ಮುಂದೆ ಸ್ವತಂತ್ರ ಜೀವನ ಆರಂಭಿಸುತ್ತದೆ. ಸುಮಾರು 4 ವರ್ಷ ವಯಸ್ಸಾದಾಗ ಲೈಂಗಿಕ ಪ್ರಬುದ್ಧತೆಯನ್ನು ಪಡೆಯುತ್ತದೆ. ಕೊಆಲದ ಒಟ್ಟು ಆಯಸ್ಸು 20 ವರ್ಷಗಳು. ಒಂದೊಂದು ಮರಿಯೂ ತನ್ನ ತಾಯ ಬಳಿಯಿರುವುದೇ ಸಾಮಾನ್ಯವಾದರೂ ಕೆಲವೊಮ್ಮೆ ಹಲವಾರು ತಾಯಂದಿರು ಒಟ್ಟಿಗೆ ಗುಂಪಾಗಿ ಹಾಲುಣ್ಣಿಸುತ್ತಿರುವಾಗ ಮರಿಗಳ ಅದಲುಬದಲಾಗುವುದುಂಟು. ಆಗ ಯಾವ ಕೊಆಲದ ಹಾಲನ್ನು ಯಾವ ಮರಿಯಾದರೂ ಕುಡಿಯಬಹುದು. ಹಾಲು ಕುಡಿದಾದ ಮೇಲೆ ಮರಿಗಳು ತಮ್ಮ ತಮ್ಮ ಸ್ವಂತ ತಾಯಿಪ್ರಾಣಿಗಳ ಬಳಿ ಹೋಗುತ್ತವೆ. ಈ ಕ್ರಮ ಇನ್ಯಾವ ಪ್ರಾಣಿಯಲ್ಲೂ ಕಂಡುಬರುವುದಿಲ್ಲ.
ಕೊಆಲಗಳು ಯೂಕಲಿಪ್ಟಸ್ ಎಲೆಗಳನ್ನು ಮಾತ್ರವೆ ಆಹಾರವಾಗಿ ಸೇವಿಸುವುದರಿಂದ ಇವುಗಳ ಸಂಖ್ಯೆ ಸ್ವಾಭಾವಿಕವಾಗಿಯೇ ಕಡಿಮೆ. 20ನೆಯ ಶತಮಾನದ ಆದಿಯಲ್ಲಿ ಒಂದು ಬಗೆಯ ನಿಗೂಢರೋಗಕ್ಕೆ ತುತ್ತಾಗಿ ಇವುಗಳ ಸಂತತಿ ಬಹಳವಾಗಿ ಕ್ಷೀಣಿಸಿತು. ಇವುಗಳ ಮೃದುವಾದ ತುಪ್ಪಳಕ್ಕಾಗಿ ಇವನ್ನು ಬೇಟೆಯಾಡುತ್ತಿದ್ದುದರಿಂದಲೂ ನಿರ್ವಂಶವಾಗುವ ಸ್ಥಿತಿ ಬಂತು. ಈಗ ಆಸ್ಟ್ರೇಲಿಯ ಸರ್ಕಾರ ಇವುಗಳ ಬೇಟೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಕಾನೂನು ಮಾಡಿರುವುದರಿಂದ ಇವುಗಳ ಸಂಖ್ಯೆ ನಿಧಾನವಾಗಿ ಏರುತ್ತಿದೆ. ಇವನ್ನು ಬೇರೆ ದೇಶಗಳಿಗೆ ಕಳಿಸುವುದನ್ನೂ ನಿಷೇಧಿಸಲಾಗಿದೆ.
(ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ